Wednesday, January 26, 2011

ಯಲ್ಲಾಪುರದ ತೆರೆಮರೆಯ ಜಲಪಾತಗಳು

ಕ್ಷಣ ಕ್ಷಣದ ಬ್ಲಾಗ್ ಮಾಡಲಿಕ್ಕೆ ಅಂತಾನೆ ಮೊಬೈಲ್ ಬ್ಲಾಗ್ ಅಂತೆಲ್ಲ ಪರಿಚಯಿಸಿದ್ದಾರೆ. ನಾನು ಈ ಪೋಸ್ಟ್ ನ್ನ ಸ್ವಲ್ಪ ತಡವಾಗಿ ಹಾಕುತ್ತಿದ್ದೇನೆ. ಪ್ರವಾಸ ಕಥನವನ್ನ ಅಂಥ ರಸವತ್ತಾಗೇನು ಹೇಳಿಲ್ಲ, ಸ್ವಲ್ಪ ಮಾಹಿತಿ ರೂಪದಲ್ಲಿದೆ.

28-11-2010

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಮಾಗೋಡ್ ಮತ್ತು ಸಾತೊಡ್ಡಿ ಜಲಪಾತ ಎಲ್ಲರಿಗೂ ಪರಿಚಿತ ಜಲಪಾತಗಳು. ಸುತ್ತಮುತ್ತಲಿನ ದಟ್ಟ ಕಾನನದಲ್ಲಿ ಅನೇಕ ಮಿನಿ ಜಲಪಾತಗಳು ಹಲವರಿಗೆ ಅಪರಿಚಿತ. ಅವುಗಳಲ್ಲಿ ತಾರಗಾರಿನ ಬೆಣ್ಣೆಜಡ್ಡಿ
ಮತ್ತು ಅಜ್ಜಿಗುಂಡಿ ಜಲಪಾತಗಳು ಒಂದು. ಮಳೆಗಾಲದ ನಂತರ ಮತ್ತು ಜನವರಿ ಒಳಗೆ ಹೋಗುವುದು ಸೂಕ್ತವಾದರಿಂದ ಅವುಗಳ ಅನ್ವೇಷಣೆಗೆ ಒಂದು ದಿನದ ಕಿರು ಪ್ರವಾಸಕ್ಕೆ ತಾರಗಾರಿಗೆ ಹೋಗಿದ್ದೆವು.

ಬೆಟ್ಟ ಗುಡ್ಡಗಳ ಮೇಲೆಲ್ಲ ಅಡಿಕೆ ತೋಟ

ಯಲ್ಲಾಪುರದಿಂದ ಸುಮಾರು 18 ಕಿ.ಮಿ.ಕಳಚೆ ರಸ್ತೆಯಲ್ಲಿ ಚಲಿಸಿದರೆ ಸಿಗುವುದೆ ಬೀಗಾರ್ ಕ್ರಾಸ್. ಅಲ್ಲಿಂದ ಬಲಕ್ಕೆ ಹೋದರೆ ತಾರಗಾರ. ಸುತ್ತಲೂ ಪಶ್ಚಿಮ ಘಟ್ಟದ ನಿತ್ಯ ಹರಿದ್ವರ್ಣ ಕಾಡು, ಬೆಟ್ಟ ಗುಡ್ಡಗಳ ಮೇಲೆಲ್ಲ ಅಡಿಕೆ ತೋಟ, ತೋಟಕ್ಕೆ ಅಂಟಿಕೊಂಡಿರುವ ಬಾವಲಿ ಗುಹೆ, ಪಕ್ಕದಲ್ಲಿ ಹರಿಯುವ ಬೆಣ್ಣೆಜಡ್ಡಿ ಜಲಪಾತ, ಜಲಪಾತಗಳ ಸರಮಾಲೆಯಂತಿರುವ ಅಜ್ಜಿಗುಂಡಿ ಜಲಪಾತ ಹಾಗು ತಗ್ಗು ಪ್ರದೇಶವಾದ್ದರಿಂದ ಯಥೇಚ್ಛ ಅಬ್ಬಿ ನೀರು, ಒಟ್ಟಿನಲ್ಲಿ ಮನಸ್ಸನ್ನು ರಿಫ್ರೆಶ್ ಮಾಡುವುದು ಇಲ್ಲಿನ ವಿಶೇಷ.

ಬೆಣ್ಣೆಜಡ್ಡಿ ಮತ್ತು ಅಜ್ಜಿಗುಂಡಿ ಜಲಪಾತಗಳು ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿದ್ದರು ಕೊನೆಗೆ ಸೇರುವುದು ಕಾಳಿನದಿಯ ಉಪನದಿಗೆ. ಇವೆರಡು ಜಲಪಾತಗಳು ಅಡಿಕೆ ತೋಟಡ ಹಿಮ್ಮಪರದೆಯಂತೆ ನೋಡುಗರ ಮನ ಸೂರೆಗೊಳಿಸುತ್ತವೆ. ಊರನ್ನ ಪ್ರವೇಶಿಸಿದಾಗ "ಧೊ" ಎನ್ನುವ ನೀರಿನ ಶಬ್ಧ ಕೆಳಿಸುತ್ತದೆ. ಅದನ್ನೆ ಹಿಂಬಾಲಿಸಿದರೆ ಸಿಗುವುದೆ ಅಜ್ಜಿಗುಂಡಿ ಜಲಪಾತ. ನೀರು ಅಗಲವಾಗಿ ಹರಿಯುವದರಿಂದ ಜಲಪಾತ ದೊಡ್ಡದಾಗಿಯು ಮತ್ತು ಹಾಲಿನ ಅಭಿಷೇಕದಂತೆಯು ನೋಡುಗರ ಮನ ತಣಿಸುತ್ತದೆ.

ಅಜ್ಜಿಗುಂಡಿ ಜಲಪಾತ

ಬೆಣ್ಣೆಜಡ್ಡಿಗೆ ಕಾಲ್ನಡಿಗೆಯಲ್ಲಿ ಸುಮಾರು 2 ಕಿ.ಮಿ.ಭತ್ತದ ಗದ್ದೆ ಬೈಲು ಮತ್ತು ಅಡಿಕೆ ತೋಟಗಳ ಮಧ್ಯೆ ಚಾರಣ ಮಾಡಿದರೆ ಸಿಗುವುದೆ ಅಪರೂಪದ ಬಾವಲಿ ಗುಹೆ ಮತ್ತು ಜಲಪಾತ. ಗುಹೆ ಪಕ್ಕದಲ್ಲಿ ದೊಡ್ಡ ಶವರ್ ನಂತೆ ಬೀಳುವ ನೀರು ಒಂದು ವಿಶಿಷ್ಟ ಅನುಭವವನ್ನು ನೀಡುತ್ತದೆ. ಇಲ್ಲಿಂದ ಹರಿಯುವ ನೀರು ಸಣ್ಣ ಸಣ್ಣ ಮಿನಿ ಜಲಪಾತಗಳನ್ನು ಸೃಷ್ಟಿಸಿ ತೋಟದ ನೀರಾವರಿಗೆ ಮತ್ತು ಕುಡಿಯುವ (ಅಬ್ಬಿ ) ನೀರಿನ ಮೂಲವಾಗಿದೆ. ಗುಹೆ ಸಾವಿರಾರು ಬಾವಲಿಗಳಿಗೆ ವಾಸಸ್ಥಾನವಾಗಿದ್ದು, ಇವುಗಳಿಂದ ಸಂಗ್ರಹವಾಗುವ ಹಿಕ್ಕೆ ಸುತ್ತಮುತ್ತಲಿನ ಕೃಷಿಕರಿಗೆ ಉಪಯುಕ್ತ ಗೊಬ್ಬರ.

ಬೆಣ್ಣೆಜಡ್ಡಿ ಉಪ ಜಲಪಾತ

ಬೆಣ್ಣೆಜಡ್ಡಿ ಜಲಪಾತ ಮತ್ತು ಪಕ್ಕದಲ್ಲಿ ಬಾವಲಿ ಗುಹೆ

ಈ ಜಲಪಾತಗಳು ಹೊರಜಗತ್ತಿಗೆ ಅಪರಿಚಿತ, ಇಲ್ಲಿಗೆ ಹೊಗುವದು ಸ್ಥಳೀಯರ ಸಹಾಯವಿಲ್ಲದೆ ಅಸಾಧ್ಯ. ತಾರಗಾರಿನ ಜನರ ಸಹೃದಯವಂತಿಕೆ ಮತ್ತು ಪರಿಸರದ ಹಸಿರುವಂತಿಕೆ ಮತ್ತೆ ಮತ್ತೆ ನಮ್ಮನ್ನು ಕೈ ಬಿಸಿ ಕರೆಯುತ್ತಿವೆ.

ನಿಸರ್ಗದಲ್ಲಿ ಸರಗಳ ಪುಂಜ (ಬಯನೆ ಶಿಂಗಾರ )

ನಮ್ಮ ತಂಡ; ಚಿತ್ರದ ಹಿಂದೆ ಇರುವುದು ನಾನು :)

Thursday, January 20, 2011

Update :ಲವಲVKಯಿಂದ ಶಾಕ್!

ಕಳೆದ 8-10 ತಿಂಗಳ ಹಿಂದಿನ ಮಾತು, ವಿಜಯ ಕರ್ನಾಟಕದವರು ನನ್ನ ಬ್ಲಾಗಿನ ಫೋಟೋವನ್ನ ಗೊತ್ತಿಲ್ಲದೆ ( ಅಂದರೆ ಅಂತರ್ ಜಾಲದಿಂದ ಕದ್ದು ) ಪ್ರಕಟಿಸಿ, ನಂತರ ತಪ್ಪು ಅಂತ ಒಪ್ಪಿಕೊಂಡು ( ವಿವರಗಳಿಗೆ ನನ್ನ ಬ್ಲಾಗನ ಹಿಂದಿನ ಪೋಸ್ಟ್ ನೋಡಿ, ಅಥವಾ ಇಲ್ಲಿ ಕ್ಲಿಕ್ಕಿಸಿ ) ಜೊತೆಗೆ ಗೌರವ ಧನ ಕಳಿಸುತ್ತೇನೆ ಅಂತ ಆಗಿನ ಉಪಸಂಪಾದಕರು ರೈಲು ಬಿಟ್ಟಿದ್ದರು.ನಾನು ಒಂದೆರಡು ಮಾತಾಡಿ ಸರಿ, ಅಡ್ಡಿಲ್ಲ ಅಂತ ಗೊಣು ಅಲ್ಲಾಡಿಸಿದ್ದೆ.

2-3 ತಿಂಗಳಾದರೂ ಗೌರವಧನವು ಇಲ್ಲ, ಏನೂ ಇಲ್ಲ.ಜೊತೆಗೆ ಒಂದೆರಡು ಇ-ಮೇಲ್ ಮಾಡಿದ್ದೆ, ನಿರುತ್ತರ.ಸರಿ ದೊಡ್ಡ ಸಂಸ್ಥೆ, ನಂ.1 ಪತ್ರಿಕೆ, ಪ್ರೊಸೆಸ್ಸಿಂಗ್ ಟೈಮ್ ಜಾಸ್ತಿ ಇರಬಹುದು ಅಂತ ಹೇಳಿ ಮತ್ತೆ ಸುಮ್ಮನಾದೆ.

ಮತ್ತೆ 2-3 ತಿಂಗಳಾದರೂ ಗೌರವಧನ ಇಲ್ಲ.ನಂತರ ನೆನಪಾಗಿ ಕಾನೂನು ಕ್ರಮ ಜರುಗಿಸುತ್ತೇನೆ ಅಂತ ಹೇಳೋಣ ಹೇಳಿ ದೂರವಾಣಿ ಮೂಲಕ ಸಂಪರ್ಕಿಸಿದೆ.ಅ ಕಡೆಯಿಂದ ಯಾವೊಂದು ಉತ್ತರವಿರಲಿಲ್ಲ.ಯಾರು ನಂಬುತ್ತಿರೋ ಬಿಡುತ್ತಿರೋ ಅದೇ ದಿನವೆ ವಿಜಯ ಕರ್ನಾಟಕದ ರಾಜೀನಾಮೆ ಪ್ರಹಸನ ನಡೆದದ್ದು.ಸಂಪಾದಕರೊಂದೆ ಅಲ್ಲ, ಜೊತೆಗೆ ಉಪಸಂಪಾದಕರು ಸೇರಿ 3-4 ವಿಕೆಟ ಬಿದ್ದಿವೆ ಅಂತ ಗೊತ್ತಾಗಿದ್ದು.

ಆಗಿನ ಉಪಸಂಪಾದಕರು ವಿಜಯ ಕರ್ನಾಟಕ ಬಿಟ್ಟರು , ಜೊತೆಗೆ ನನ್ನ ಗೌರವ ಧನವು 3x ಗೋವಿಂದ...ಆಗಿನ ಉಪಸಂಪಾದಕರು ಯಾರಿದ್ದರು ಅಂತ ವಿವರವಾಗಿ ಹೇಳಬೇಕಾಗಿಲ್ಲ.ವಿಜಯ ಕರ್ನಾಟಕದಿಂದ ಹೊರಬಂದಮೇಲೆ ಬ್ಲಾಗ್ ಬರಿತಾ ಇದಾರೆ... ಗೊತ್ತಾಯ್ತಲ್ಲ...?

ಈಗಾಗಲೇ ಈ ವಿಷಯ ಹಳೆಯದಾದ್ದರಿಂದ ಕಾನೂನು ಕ್ರಮದ ಬಗ್ಗೆ ಕೈಬಿಟ್ಟಿದ್ದೇನೆ.ಇದೆಲ್ಲ ಶ್ರೀಶಂರ ಹಣವೂ ಇಲ್ಲ ಗುಣವೂ ಇಲ್ಲ ಓದಿದ ಮೇಲೆ ನೆನಪಾಯಿತು.

(ಮಾಜಿ) ಉಪಸಂಪಾದಕರಿಗೆ,
ಆಗ ಉತ್ತರಿಸಲಾಗದ ಇ-ಮೇಲ್ ಗೆ ಈಗಲಾದರೂ ಉತ್ತರ ಸಿಕ್ಕಿತೆ ? ಯಾಕೆಂದರೆ ಈಗ ಸ್ವಲ್ಪ ಬಿಡುವಿದೆಯೆಲ್ಲ!