Tuesday, October 6, 2009

ಪಾತರಗಿತ್ತಿ ಪಕ್ಕಾ...

ಪಾತರಗಿತ್ತಿ ಪಕ್ಕಾ ನೋಡಿದೇನೆ ಅಕ್ಕಾ...
ಈ ಹಾಡನ್ನು ಕೇಳಿದವರಾರಿಲ್ಲ.ಬಹುಶಃ ಯಾರಿಗಾದರು ಚಿಟ್ಟೆಗಳನ್ನು ನೋಡಿದರೆ ಬೇಂದ್ರೆಯವರ ಈ ಕವನ ನೆನಪಾಗುತ್ತದೆ.ಉತ್ತರ ಕನ್ನಡದ ಯಲ್ಲಾಪುರದಲ್ಲಿ ಕೆಲವು ಅಪರೂಪದ ಚಿಟ್ಟೆಗಳನ್ನು ನೋಡುವ ಅದೃಷ್ಟ ನನ್ನಾದಾಯಿತು.

Blue Mormon

ಯಲ್ಲಾಪುರ, ಪಶ್ಚಿಮ ಘಟ್ಟದ ಒಂದು ಭಾಗವಾಗಿದೆ.ದಟ್ಟಕಾಡು, ಪ್ರಾಣಿ, ಪಕ್ಷಿಗಳಲ್ಲದೆ ಅತ್ಯಾಕರ್ಷಕ ಚಿಟ್ಟೆಗಳನ್ನು ನೋಡಬಹುದು.ಚಿಟ್ಟೆಗಳು ಅತ್ಯಂತ ಆಕರ್ಷಕ ಮತ್ತು ಕ್ರಿಯಾಶೀಲ ಕೀಟಗಳು.ತಮ್ಮ ಆಕರ್ಷಕ ಬಣ್ಣಗಳಿಂದ ನಮ್ಮ ಮನಸೂರೆಗೊಳಿಸುವುದಲ್ಲದೆ ಹೂಗಳ ಪರಾಗ ಸ್ಪರ್ಶದಲ್ಲಿ ಅತ್ಯಂತ ಮಹತ್ವದ ಪಾತ್ರವಹಿಸುತ್ತವೆ.ಅತ್ಯಂತ ಶೀಘ್ರಗ್ರಾಹಿಗಳಾಗಿದ್ದು ಕ್ಯಾಮರಾದಲ್ಲಿ ಸೆರೆಹಿಡಿಯುವುದು ಕಷ್ಟ.

Southern Birdwing

ಇಲ್ಲಿ ನೂರಕ್ಕೂ ಹೆಚ್ಚು ಪ್ರಭೇಧಗಳನ್ನು ಗುರುತಿಸಿದ್ದಾರೆ.ಇವು ಕೆಲವು ಋತುವಿನಲ್ಲಿ ಮಾತ್ರ ವಲಸೆ ಬರುವ ಜೀವಿಗಳಾಗಿದ್ದು ಒಂದೆ ಕಾಲಕ್ಕೆ ಎಲ್ಲವು ಕಾಣಿಸಲಾರವು.ಮಾನಸೂನ್ ನಂತರದ ದಿನಗಳಲ್ಲಿ ಅಂದರೆ ಸಪ್ಟೆಂಬರ್ ನಿಂದ ಅಕ್ಟೋಬರ್ ದಿನಗಳಲ್ಲಿ ಹೆಚ್ಚಾಗಿ ಕಾಣ ಸಿಗುತ್ತವೆ.

Common Mormon Female

Common Mormon Male and Female

ಇಲ್ಲಿ ಮುಖ್ಯವಾಗಿ ಕಾಣುವ ಪ್ರಭೇಧಗಳೆಂದರೆ, ಭಾರತದ ಅತಿ ದೊಡ್ಡ ಚಿಟ್ಟೆಯಾದ Southern Birdwing, Plain Tiger, Stripped Tiger, Blue Tiger, Lime Buterfly, Common Mime, Common Emigrant, Common Mormon, Danaid Eggfly, Common Jezebel, Crimson Rose, Paris Peacock, Common Indian Crow ಇನ್ನೂ ಅನೇಕ.

Lime Buttefly

ಅಕ್ಟೋಬರ್ ಮೊದಲ ವಾರ ವನ್ಯಜೀವಿಗಳ ಸಪ್ತಾಹ.ಚಿಟ್ಟೆಗಳು ನಮ್ಮ ಸುತ್ತಮುತ್ತ ಇರುವುದು ಒಳ್ಳೆಯ ವಾತಾವರಣದ ಸಂಕೇತ.ವಾತಾವರಣವನ್ನು ಕಲುಷಿತಗೊಳಿಸದೆ ಮುಂದಿನ ನಮ್ಮ ಪೀಳಿಗೆಗೆ ಊಳಿಸೋಣ, ಈ ನಿಟ್ಟಿನಲ್ಲಿ ಬದ್ಧರಾಗಿರೋಣ.

ನುಡಿಚಿತ್ರ | nudichitra

October 1-7, World Wildlife Week -Celebrate this week by building awareness on the importance of preservation of our wildlife.

Sunday, May 24, 2009

ಜ್ಯೋತಿಷ್ಯ:

ತಿಮ್ಮ:
ಗುಂಡಾ... ಈ ಸಲ ಹೆಂಗಸರೊಬ್ಬರು ಪ್ರಧಾನಿ ಅಂತ ಜ್ಯೋತಿಷ್ಯಿ ಹೇಳಿದ್ದರಲ್ಲವೇನೋ? ಮತ್ತೆ ಸಿಂಗ ಅವರೇ ಪ್ರಧಾನಿ ಯಾಗಿದ್ದಾರೆ?...

ಗುಂಡಾ:
ಸರಿ... ಜ್ಯೋತಿಷ್ಯ ನಿಜವಾಗಿದೆಯಲ್ಲಾ !
:)

Sunday, May 10, 2009

ಬಹು ಉಪಯೋಗಿ ಹಣ್ಣು.

ಹೋದ ತಿಂಗಳ ಮೊದಲಲ್ಲಿ (ಏಪ್ರಿಲ್-೦9) ಶುಭ ಕಾರ್ಯದಲ್ಲಿ ಪಾಲ್ಗೊಳ್ಳಲು ಮಾವನ ಮನೆಗೆ (ಯಲ್ಲಾಪುರದಿಂದ 11 ಕಿ.ಮಿ) ಹೋಗಿದ್ದೆ. ಮನೆ ಅಂಗಳದ ಬದಿಯಲ್ಲಿ ಹಸಿರು ಎಲೆ ಕೆಂಪು ಚಿಗುರು ಮತ್ತು ಕೆಂಪು ಹಣ್ಣುಗಳಿರುವ ಮರ ಎಲ್ಲರ ಗಮನ ಸೆಳೆಯುತ್ತಿತು. ಬಂದವರೆಲ್ಲಾ ಆ ಹಣ್ಣಿನ ಬಗ್ಗೆ ಮಾತಡುತ್ತಿದ್ದರು."ನಾಳೆ ಇದರ ಪಾನಕ ಮಾಡಿದರೆ ಚೆನ್ನಾಗಿರತ್ತೆ" ಅಂತೆಲ್ಲ ಇದರ ಗುಣಗಾನ ಮಾಡುತ್ತಿದ್ದರು. ಈಗ ನಾನು ಹೇಳ ಹೊರಟಿರುವುದು ಬೇರಾವ ಹಣ್ಣಿನ ಬಗ್ಗೆ ಅಲ್ಲ,ಮಲೆನಾಡಿನ ಚಿರಪರಿಚಿತ "ಮುರಗಲ" ಅಥವಾ "ಕೋಕಮ್" (Cocum or Kokum) ಹಣ್ಣು.


ಹೆಚ್ಚಾಗಿ ಪಶ್ಚಿಮ ಘಟ್ಟ ಮತ್ತು ಪಶ್ಚಿಮ ಕರಾವಳಿ ಕಾಡುಗಳಲ್ಲಿ ಕಾಣ ಸಿಗುತ್ತದೆ.ನಿತ್ಯ ಹರಿದ್ವರ್ಣ ಕಾಡು ಸೂಕ್ತವಾದರು ಸ್ವಲ್ಪ ಮಳೆ ಬೀಳುವ ಪ್ರದೇಶದಲ್ಲೂ ಬೆಳೆಯುತ್ತದೆ[*]. ಇದನ್ನು ಸಣ್ಣ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು ಇದಕ್ಕೆ ಯಾವುದೇ ಗೊಬ್ಬರ ಅಥವಾ ನೀರಾವರಿ ಅವಶ್ಯಕತೆ ಇರುವುದಿಲ್ಲ[*]. ಮಂಗಗಳ ಕಾಟ ಬಿಟ್ಟರೆ ಇದಕ್ಕೆ ಯಾವುದೇ ರೋಗ ಭಾಧೆಯಿಲ್ಲ[*].

ಈ ಹಣ್ಣಿನ ವೈಜ್ಞಾನಿಕ ಹೆಸರು: Garcinia Indica[*]. ಸ್ಥಳಿಯರು ಮುರಗಲು,ಆಮ್ಸೊಲ್,ಪುನರ್ಪುಳಿ,ಕೋಕಮ್.. ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಇದರಲ್ಲಿ ಕೋಕಮ್ (Cocum) ಹೆಸರು ಪರಿಚಿತ.

ಇದರಲ್ಲಿ ಕೆಂಪು ಮತ್ತು ಬಿಳೆ ಜಾತಿಯನ್ನು ನಾವು ಕಾಣಬಹುದು. ಹಣ್ಣು ಗಾತ್ರದಲ್ಲಿ 3.5-4 ಸೆ.ಮೀ. ವ್ಯಾಸ (Diameter) ಹೊಂದಿದ್ದು ಕೊಯ್ದಾಗ ಬಿಳೆ ಮೃದು ಕವಚವುಳ್ಳ 6-8 ಬೀಜವನ್ನು ಕಾಣಬಹುದು. ರುಚಿಯಲ್ಲಿ ಹುಳಿ ಮಿಶ್ರಿತ ಸಿಹಿಯನ್ನು ಹೊಂದಿದ್ದು ಹುಳಿಪ್ರಿಯರಿಗೆ ಬಲು ಇಷ್ಟ.


ಕೋಕಮ್ (Cocum) ಹಣ್ಣು ಬಹು ಉಪಯೊಗಿ ಹಣ್ಣು ಎಂದರೆ ತಪ್ಪಾಗಲಾರದು. ಇದರ ಪ್ರತಿಯೊಂದು ಭಾಗವು ಉಪಯುಕ್ತ ಮತ್ತು ಔಷಧಿ ಗುಣಗಳನ್ನು ಹೊಂದಿದೆ. ಬಿಳೆ ಹಣ್ಣು ಹೆಚ್ಚು ಔಷಧಿ ಉಪಯುಕ್ತವೆಂಬುದು ಹಳೆ ಜನರ ಅಂಬೋಣ.

ಹಣ್ಣಿನ ರಸ,ಬೀಜ ಮತ್ತು ಒಣಸಿಪ್ಪೆಗಳನ್ನು ನಾನಾ ರೀತಿಯಲ್ಲಿ ಉಪಯೋಗಿಸುತ್ತಾರೆ. ತಾಜಾ ಹಣ್ಣಿನ ರಸದಿಂದ ಪಾನಕ,ಕುಡಿಯುವ ಸಾರು (ತಿಳಿ ಸಾರು) ಮಾಡುತ್ತಾರೆ. ಒಣಗಿದ ಸಿಪ್ಪೆಯನ್ನು ಅಡುಗೆಯಲ್ಲಿ ಹುಳಿಗಾಗಿ ಮತ್ತು ಸಿಪ್ಪೆಯಿಂದ ಕುದಿಸಿದ ನೀರನ್ನು ಪಿತ್ತ ನಾಶಕವಾಗಿಯೂ ಉಪಯೊಗಿಸುತ್ತಾರೆ. ಇನ್ನು ಬೀಜದಿಂದ ತೆಗೆದ ಎಣ್ಣೆಯು (Wax) ಕಾಲು ಒಡಕು ಮತ್ತು ಮೈ ಒಡಕಿಗೆ ರಾಮ ಬಾಣ. ಒಂದು ಲೊಟ ಬಿಸಿ ನೀರಿಗೆ ಕಡಲೆ ಕಾಳಿನಸ್ಟು ಎಣ್ಣೆ ಹಾಕಿ ಕುಡಿದರೆ ಆಮಶಂಕೆಗೆ ಔಷಧಿ. (ಇದನ್ನು ಜಾನುವಾರುಗಳಿಗೂ ಉಪಯೋಗಿಸಬಹುದು.) ಮರದ ತೊಗಟೆಯ ತಣ್ಣನೆ ಕಷಾಯದಿಂದ ಪಾಶ್ವವಾಯು ಆದ ಜಾಗಕ್ಕೆ ದಿನಕ್ಕೆ 2-3 ಭಾರಿ ತೊಳೆದರೆ ಕಡಿಮೆ ಆಗುತ್ತದೆಯಂತೆ[*]. ಇನ್ನು ಹಲವಾರು ಔಷಧಿ ಗುಣಗಳು ಮತ್ತು ಉಪಯೋಗಗಳು ಸಂಗ್ರಹಿಸಿದರೆ ಸಿಗಬಹುದು.


ಇನ್ನು ಎಲ್ಲರಿಗು ಎಲ್ಲಿ ತಾಜಾ ಹಣ್ಣು ಸಿಗಬೇಕು ಹೇಳಿ? ಅದಕ್ಕೆಂದೆ ಸ್ಥಳಿಯರು ಮತ್ತು ಸಂಘ ಸಂಸ್ಥೆಗಳು ಹಣ್ಣಿನ ದಪ್ಪ ರಸವನ್ನು (Syrup) ಮಾರುಕಟ್ಟೆಗೆ ಬಿಟ್ಟಿವೆ.ಇದಕ್ಕೆ ಸ್ವಲ್ಪ ನೀರು ಮತ್ತು ಸಕ್ಕರೆ ಹಾಕಿದರೆ ಪಾನಕ ತಯಾರು!.ತಾಜಾ ಹಣ್ಣಿನ ರಸಕ್ಕೆ ಹೋಲಿಸಿದರೆ ರುಚಿ ಸ್ವಲ್ಪ ಭಿನ್ನವಾದರೂ ಬೇಸಿಗೆಯಲ್ಲಿ ಚೆನ್ನಾಗಿರುತ್ತದೆ. ಮಲೆನಾಡಿನ ಆಂಗಡಿಗಳಲ್ಲಿ 3೦-6೦ ರೂಪಾಯಿಗಳಲ್ಲಿ ಲಭ್ಯ.


ಕೋಕಮ್ (Cocum) ಹಣ್ಣಿನ ಉತ್ಪನ್ನಗಳ ಜನಪ್ರಿಯತೆ ಇನ್ನೂ ಹೆಚ್ಚಬೇಕಿದ್ದು ಈ ನಿಟ್ಟಿನಲ್ಲಿ ತಳಿಯ ಅಭಿವೃದ್ದಿ ಮತ್ತು ಕೃಷಿ ಬೆಳೆಯಾಗಿ ರೂಪುಗೊಳ್ಳಬೇಕಿದೆ. ಭಾರತದ ಮೊದಲ ತಂತ್ರಜ್ಞರ ಸಭೆಯನ್ನು (Seminar) ಗೋವಾ ವಿಶ್ವವಿದ್ಯಾಲಯ 2೦೦5 [*] ರಲ್ಲಿ ಎರ್ಪಡಿಸಿ ಸಂಶೋಧನೆಗೆ ನಾಂದಿ ಹಾಡಿದೆ. ನೀವು ಒಮ್ಮೆ ಕೋಕಮ್ ಪಾನಕ (Cocum Juice) ಕುಡಿದು ನೋಡಿ. ಮತ್ತೊಂದು ಬಾಟಲಿ ಖಾಲಿಯಾಗುವುದು ಗ್ಯಾರಂಟಿ!

ನುಡಿಚಿತ್ರ | nudichitra

==========================================================
[*]ಆಧಾರ (Reference) :ಇಂಟರನೆಟ್ .
==========================================================

Saturday, May 9, 2009

ಮೊದಲ ಮಾತು...

ಹೋದ ತಿಂಗಳು (ಏಪ್ರಿಲ್-೦9) ಮಾವನ ಮನೆಗೆ ಹೋಗಿದ್ದೆ.ಅಲ್ಲೆಲ್ಲ Blog ನದೆ ಮಾತು. ಆಗಿದ್ದು ಇಷ್ಟೆ.ಅಡಿಕೆ ಪತ್ರಿಕೆಯಲ್ಲಿ Blog ಬಗ್ಗೆ ಒಂದು ವಿಶೇಷ ಲೇಖನ ಇತ್ತು. ನನಗೂ ಸಹ ಆಗ ಅನಿಸಿತ್ತು ಏನಾದರು ಚೂರು ಪಾರು ಬರೆಯೋಣವೆಂದು. Blog account ಮಾಡಿ 2-3 ವರುಷವೇ ಆಗಿತ್ತು. ಏನು ಬರೆಯೋದು ಅಂತ ತೋಚಿರಲಿಲ್ಲ. ಇಚ್ಛಾ ಶಕ್ತಿಯ ಕೊರತೆ ಇದ್ದಿರಬಹುದು. ಈಗ ಬರೆಯಲು ಕಾಲ ಕೂಡಿ ಬಂದಿದೆ."ಕುಂಟೆ ಬಡ್ಡೆ ಮೇಲೆ"ಅಂತ ಹೆಸರಿಟ್ಟಿದ್ದೇನೆ.

ಏನಿದು ಹೆಸರು ವಿಚಿತ್ರವಾಗಿದೆಯಲ್ಲಾ ಅಂತ ಅನಿಸಿದ್ದಿರಬಹುದು. ಕುಂಟೆ ಬಡ್ಡೆ ಅಂದರೆ ಗ್ರಾಮೀಣ ಭಾಷೆಯಲ್ಲಿ ಬಿದ್ದ ಒಣಗಿದ ಮರ ಅಥವಾ ಮರದ ಚೂರು. ನನ್ನ ಪ್ರೌಢ ಶಾಲಾ (Highschool) ದಿನಗಳಲ್ಲಿ ನಮ್ಮ ರೇಖಾಗಣಿತದ (Geometry) ಮೇಷ್ಟ್ರು ಅಲ್ಲಲ್ಲಿ ಚಟಾಕಿ ಹಾರಿಸುತ್ತ "ಅರ್ಥ ಆಗದಿದ್ದರೆ ಕುಂಟೆ ಬಡ್ಡೆ ಮೇಲೆ ಕುಳಿತು ನೋಡಿ" ಅಂತೆಲ್ಲ ಹೇಳುತ್ತಿದ್ದುದರ ಪ್ರಭಾವ ಇರಬಹುದೇನೊ ಈ ಶೀರ್ಷಿಕೆಗೆ.ಈ ಹೆಸರು ಸಾಂಕೇತಿಕವಾಗಿ ಮಾತ್ರ.

ನೋಡಿದ್ದು,ಕೇಳಿದ್ದು ಮತ್ತು ಸ್ವಲ್ಪ ನನ್ನದನ್ನು ಸೇರಿಸಿ ಬರೆಯುವ ಪ್ರಯತ್ನ ಮಾಡಿದ್ದೇನೆ. ಬಿಡುವು ಇದ್ದಾಗ ಈ Blog ಗೆ ಭೇಟಿ ಕೊಡಿ.

ನಿಮ್ಮ ಸಲಹೆ ಸೂಚನೆಗಳನ್ನು ತಪ್ಪದೇ Comments ನಲ್ಲಿ ನಮೂದಿಸಿ.

ಇಂತಿ,
ರವಿ ಹೆಗಡೆ.